ಕಿಟಾ - ಕಿಯೂಷೂ

 ಜಪಾನಿನ ಒಂದು ಪಟ್ಟಣ. 1963ರಲ್ಲಿ ವಕಮಟ್ಸು, ಯಹಾಟ, ಟೊಬಾಟ, ಕೊಕರ ಮತ್ತು ಮೋಜಿ ಪಟ್ಟಣಗಳನ್ನು ಒಟ್ಟುಗೂಡಿಸಿ ಇದನ್ನು ರಚಿಸಲಾಯಿತು.  ಈ ಐದೂ ಈಗ ಕಿಟಾ-ಕಿಯೂಷೂ ನಗರದ ಐದು ವಿಭಾಗಗಳು. ಫುಕುವೋರ ಪ್ರಾಂತ್ಯದ ಉತ್ತರ ಭಾಗದಲ್ಲಿ ಈ ಪಟ್ಟಣವಿದೆ. ಇದರ ವಿಸ್ತೀರ್ಣ 452 ಚ.ಕಿಮೀ. ಇದು ಷಿಮೊನೊಸೆಕಿ ಮತ್ತು ಟ್ಸಷಿಮ ಜಲ ಸಂಧಿಗಳ ದಡದಲ್ಲಿದೆ. ಜನಸಂಖ್ಯೆಯ ದೃಷ್ಟಿಯಿಂದ ಇದು 1965ರಲ್ಲಿ ಜಪಾನಿನ ಏಳನೆಯ ನಗರವಾಗಿತ್ತು (ಜನಸಂಖ್ಯೆ: 10,42,389). ಕಿಯೂಷೂನಲ್ಲಿ ಇದೇ ಅತ್ಯಂತ ದೊಡ್ಡದು.

 ಕಿಟಾ-ಕಿಯೂಷೂ ಜಪಾನಿನ ಪ್ರಮುಖ ಕೈಗಾರಿಕಾ ಕೇಂದ್ರಗಳಲ್ಲಿ ಒಂದು. ಯಹಾಟದಲ್ಲಿ ಕಬ್ಬಿಣ ಮತ್ತು ಉಕ್ಕು, ರಾಸಾಯನಿಕ ಸಿಮೆಂಟ್ ಮತ್ತು ಗಾಜಿನ ಸಾಮಾನುಗಳೂ ವಕಮಟ್ಸುವಿನಲ್ಲಿ ಲೋಹಗಳು, ಯಂತ್ರಗಳು, ಹಡಗುಗಳು ಮತ್ತು ರಾಸಾಯನಿಕಗಳೂ ಟೊಬಾಟದಲ್ಲಿ ಹತ್ತಿ ಬಟ್ಟೆಗಳು ಮತ್ತು ಲೋಹಗಳೂ ಕೊಕುರದಲ್ಲಿ ಕಬ್ಬಿಣ ಮತ್ತು ಉಕ್ಕು ಯಂತ್ರಗಳೂ ವಿಶೇಷವಾಗಿ ತಯಾರಾಗುತ್ತವೆ. ಟೊಬಾಟದಲ್ಲಿ ಆಳ ಕಡಲಿನ ಮತ್ಸ್ಯೋದ್ಯಮವೂ ಮುಖ್ಯ. ಮೋಜಿಯು ಎಂಬುದು ಕಿಟಾ-ಕಿಯೂಷೂ ಪಟ್ಟಣದ ಪ್ರಮುಖ ಬಂದರು. ಇದು ಕಿಟಾ-ಕಿಯೂಷೂವಿನ ಪೂರ್ವತಮ ವಿಭಾಗ. ಕಲ್ಲಿದ್ದಲು ವಿಶೇಷವಾಗಿ ಈ ಬಂದರಿನ ಮೂಲಕ ಬರುತ್ತದೆ. ಹಡಗು ನಿರ್ಮಾಣ ಮತ್ತು ಆಹಾರ ತಯಾರಿಕೆ ಇಲ್ಲಿಯ ಎರಡು ಮುಖ್ಯ ಕೈಗಾರಿಕೆಗಳು. ಕಿಟಾ-ಕಿಯೂಷೂವಿನ ಎರಡು ದೊಡ್ಡ ಸಮಸ್ಯೆಗಳೆಂದರೆ ನೆಲದ ಅಭಾವ ಮತ್ತು ಕೈಗಾರಿಕೆಗೆ ನೀರಿನ ಕೊರತೆ. ನಗರದಲ್ಲಿ ಜನರ ಒತ್ತಡ ಅಧಿಕವಾಗಿದೆ. ಇಲ್ಲಿಂದ ಷಿಮೊನೊಸೊಕಿ ಜಲಸಂಧಿಯ ಆಚೆಗಿರುವ ಹಾನ್ಷೂ ನಗರಕ್ಕೆ ಎರಡು ಸುರಂಗಗಳಿವೆ. ಇವುಗಳಲ್ಲಿ ಒಂದು ರೈಲು ಮಾರ್ಗಗಳಿಗೂ ಇನ್ನೊಂದು ರಸ್ತೆ ಮಾರ್ಗಗಳಿಗೂ ಮೀಸಲು. 

(ಎಂ.ಎ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ